2019 ವಿಹಂಗಮ ನೋಟ : ಖಾಸಗಿ ಬದುಕಿನ ಸಂಕ್ರಮಣ!

0
161

ಕಾಲ ವೇಗವಾಗಿ,ನಿಧಾನವಾಗಿ ಓಡುವುದಿಲ್ಲ ತನ್ನ ಪಾಡಿಗೆ ತಾನು ಸಮರ್ಪಕವಾಗಿ ಸಾಗಿರುತ್ತದೆ. ನಾವು ಖುಷಿಯಾಗಿದ್ದರೆ ವೇಗ ಹೆಚ್ಚುತ್ತದೆ, ದುಃಖಿತರಾಗಿದ್ದರೆ ನಿಧಾನವೆನಿಸುವುದು ಸಹಜ.
ಐನ್ ಸ್ಟೈನ್ ಹೇಳುವ ಸಾಪೇಕ್ಷ ಸಿದ್ಧಾಂತದ ಹಾಗೆ!

2018 ರಲ್ಲಿ ಎರಡು ಪುಸ್ತಕಗಳು ಪ್ರಕಟಗೊಂಡ ಉಮೇದು ಈ ವರ್ಷ ಭಿನ್ನ ರೀತಿಯಲ್ಲಿ ಆರಂಭವಾಗಿ ಸ್ಥಗಿತಗೊಂಡ ಸಾಂಗತ್ಯ ಪ್ರಕಾಶನಕ್ಕೆ ಮರು ಜೀವ ನೀಡಲಾಯಿತು. ಸಾಹಿತ್ಯ ಸಂಗಾತಿ ಸಿಕಾ (ಕಾವ್ಯಶ್ರೀ ಮಹಾಗಾಂವಕರ) ಅವರ ಓಳ್ಕಲ್ಲ ಒಡಲು ಮತ್ತು ನನ್ನ ಇಂಗ್ಲೆಂಡ್ ಪ್ರವಾಸ ಕಥನ ಹೊಸ ರೂಪ ಪಡೆದು ಮಗಲಾಯಿ ಹುಡುಗನ ಪಾರೆನ್ ಟೂರು ಪ್ರಕಟಗೊಂಡದ್ದು ಕೊಂಚ ಸಮಾಧಾನ. ಕಾಂಬಳೆ ಪ್ರಿಂಟರ್ಸ್ ಅವರ ಮಗ ಈರಣ್ಣ ಆಸ್ಥೆಯಿಂದ ಮುದ್ರಿಸಿದ್ದಾರೆ.

 

ಅತಿ ಹೆಚ್ಚು ಬರೆದ ವರ್ಷ ಇದಾಯಿತು. ಯಾವುದಾದರೊಂದು ಪ್ರಕಾರದ ಕೃತಿ ಬರಲಿಲ್ಲವಾದರೂ ಹತ್ತು ಹಲವು ಬಗೆಯ ಪ್ರಚಲಿತ ವಿಷಯಗಳಿಗೆ ಹೊಸ ಸ್ವರೂಪ ನೀಡಿದೆ. ಅನೇಕ ಡಿಜಿಟಲ್ ಮೀಡಿಯಾಗಳು ಪ್ರೀತಿಯಿಂದ ಬರಹಗಳಿಗೆ ವೇದಿಕೆ ಕಲ್ಪಿಸಿದರು. ಟಿ.ಕೆ.ತ್ಯಾಗರಾಜ ಅವರ ದಿ ಡೆಕ್ಕನ್ ನ್ಯೂಸ್ , ಜಿ.ಎನ್ ಮೋಹನ್ ಅವರ ಅವಧಿ , ಎಲ್.ಪ್ರಕಾಶ್ ಅವರ ನಮ್ಮ ಕನ್ನಡ ಪೋರ್ಟಲ್ ಹಾಗೂ ವಿಶ್ವೇಶ್ವರ ಭಟ್ಟರ ವಿಶ್ವವಾಣಿ ಪತ್ರಿಕೆ ಮಹತ್ವದ ಲೇಖನಗಳಿಗೆ ದನಿಯಾದವು. ಧ್ಯಾನಸ್ಥನಾಗಿ ಬರೆಯುವುದನ್ನು ರೂಢಿಸಿಕೊಂಡೆ.‌ ಬರೆಯಲಾಗದು ಎಂಬ ಕಳವಳ ದೂರ ಮಾಡಿಕೊಂಡೆ.

 

 

ವೈಯಕ್ತಿಕ ಬದುಕಿನ ಅನೇಕ ತಾಕಲಾಟಗಳು,ಸಂಕಷ್ಟಗಳ ಪರಿಹಾರಕ್ಕಾಗಿ ತಡಕಾಡಿದೆ. ಆ ಗೌಪ್ಯ ನರಳಾಟ,ಯಾತನೆಗೆ ಮುಕ್ತಿ ಕೊಡುವ ಹುಡುಕಾಟ ಆರಂಭಿಸಿದೆ.
ಪಡೆದುಕೊಳ್ಳುವ, ಪಡೆದುಕೊಂಡುದ ದಕ್ಕಿಸಿಕೊಳ್ಳುವ ಸಂಘರ್ಷಕ್ಕೆ ಒಡ್ಡಿಕೊಂಡೆ. ಎಲ್ಲ ಅನುಬಂಧಗಳ ತಾರ್ಕಿಕವಾಗಿ ಹಿಡಿದಿಟ್ಟುಕೊಳ್ಳುವ ಮನದ ಧಾವಂತ ಮತ್ತು ಹಪಾಹಪಿಗಾಗಿ ಮಮ್ಮುಲ ಮರುಗಿದೆ.
ಸಾತ್ವಿಕ ಹಟ ಕೂಡ ಒಮ್ಮೊಮ್ಮೆ ಅಪಾಯಕಾರಿ ಎಂದು ಅರಿವಾಯಿತು. ಏನೂ ಮಾಡಲಾಗದು ವೈಯಕ್ತಿಕ ದೌರ್ಬಲ್ಯ ನಮ್ಮನ್ನು ತಿಂದು ಹಾಕಿದರೂ ತಿನ್ನಲಿ ಎಂದು ಮನಸ್ಸು ಬಯಸುತ್ತದೆ,ಅದೇ ಮನುಷ್ಯನ ಮಿತಿ ಮತ್ತು ಪರಿಮಿತಿ. ವೈಯಕ್ತಿಕ ದೌರ್ಬಲ್ಯವನ್ನು ಶಕ್ತಿಯಾಗಿ ದಕ್ಕಿಸಿಕೊಳ್ಳುವ ಮನೋಭಿಲಾಸೆಗೆ ಬದ್ಧನಾದೆ.

ಅದೇ ಮನೋ ಹೋರಾಟದ ಮಧ್ಯೆ ನನ್ನ ನಾ ಕಟ್ಟಿಕೊಂಡೆ.
ಒಂದಿಷ್ಟು ಓದು, ಅತಿ ಅನಿಸುವಷ್ಟು ಓಡಾಟ, ಬರಹದ ಮಧ್ಯೆ ಕಾಲ ದೂಡಿದೆ.

 

 

ದೃಶ್ಯ ಮಾಧ್ಯಮದ ಮೂಲಕ ಹೊಸ ವೇದಿಕೆ ಕಲ್ಪಿಸಿಕೊಂಡೆ. ಬಸವ ಟಿವಿ ನೀಡಿದ ಅವಕಾಶದ ಸದ್ಬಳಕೆ ಮಾಡಿಕೊಂಡು ವಚನ ವಿಶ್ಲೇಷಣೆ ಮಾಡಿದೆ.
ಸಾವಿರಾರು ಜನರನ್ನು ಎದುರಿಸಿ ಭಾಷಣ ಬಿಗಿದಷ್ಟು ಕ್ಯಾಮರಾ ಎದುರಿಸುವುದು ಸುಲಭವಲ್ಲ.
ಕ್ಯಾಮರಾ ಕಣ್ಣು ತುಂಬಾ ಸೂಕ್ಷ್ಮ. ಅದು ನಮ್ಮ ಶಕ್ತಿಗಿಂತ ದೌರ್ಬಲ್ಯಗಳನ್ನು ಹಿಡಿದು ಬಿಡುತ್ತದೆ. ನಿಸ್ಸಂಶಯ ಮತ್ತು ನಿರ್ಭಯವಾಗಿ ನಸು ನಗುತ್ತ ವಿಷಯ ಮಂಡನೆ ಮಾಡದೇ ಹೋದರೆ ನೋಡುಗ ಓಡಿ ಹೋಗುತ್ತಾನೆ ಎಂಬುದು ದಟ್ಟವಾಗಿ ಗೋಚರವಾಯಿತು.
ನಿಧಾನವಾಗಿ ನನ್ನ ನಾ ತಿದ್ದಿಕೊಂಡು ಆತಂಕ ದೂರ ಮಾಡಿಕೊಂಡೆ.

 

 

ಯಾವುದಾದರು ಇಲೆಕ್ಟ್ರಾನಿಕ್ ಮಾಧ್ಯಮ ಸೇರಿಕೊಳ್ಳಬೇಕೆಂಬ ಕನಸಿಗೆ ಬೀಗ ಹಾಕಿದೆ. ವಾತಾವರಣ ಪೂರಕವಾಗಿರದೇ ಇದ್ದಾಗ ಮತ್ತೆ ಮತ್ತೆ ಮಾಡಿದ ತಪ್ಪುಗಳನ್ನು ಮಾಡಬಾರದೆನಿಸಿತು.
ಆರ್ಥಿಕ ಮುಗ್ಗಟ್ಟನ್ನು ಕಾರಣ ಮಾಡಿಕೊಂಡು ವ್ಯಕ್ತಿತ್ವ ಮಾರಿಕೊಳ್ಳುವುದು ಸಾಧುವಲ್ಲ ಎನಿಸಿ ಎಲ್ಲ ಸಹಿಸಿಕೊಂಡೆ.

ನನ್ನೊಂದಿಗೆ ನಾನೇ ಕಣ್ಣಾ ಮುಚ್ಚಾಲೆ ಆಡುವ ಹುಂಬತನ ಬಿಡಲಿಲ್ಲ.
ಮನಸಿನ ಜಿಡ್ಡು ಬಿಡಿಸಲು ಪುನರ್ಮನನ ಮಾಡಿಕೊಳ್ಳಲು ಬಂಗಾರಮಕ್ಕಿ ಮತ್ತು ಇತರ ಕೆಲವು ಅಧ್ಯಾತ್ಮ ಕೇಂದ್ರಗಳ ಮೊರೆ ಹೋದೆ.

 

 

ಬರಹ-ಕಾಮ-ಧ್ಯಾನ ಸೂತ್ರ ಇಟ್ಟುಕೊಂಡು ನಿರ್ಭಯ-ನಿರಾಕರಣೆ-ನಿರ್ಲಿಪ್ತತೆ ಮಾರ್ಗ ಗಟ್ಟಿ ಮಾಡಿಕೊಂಡೆ.
ಅದೇನೋ ತುಡಿತ,ತಳಮಳ,ತಲ್ಲಣಗಳ ಹಲ್ಲಣದಲಿ ನಲುಗಿ ಹೋದೆನಾದರೂ ಹೇಳಿಕೊಳ್ಳುವಂತಿಲ್ಲ.
ಭಾವನಾತ್ಮಕ ಅನುಬಂಧವಿಲ್ಲದೆ ಬದುಕಲಾಗದ ಬಾಂಡೇಜ್ ನನ್ನ ಹಿಂಡಿ ಹಿಪ್ಪಿ ಮಾಡಿದರೂ ಯಾಕೋ ಕಳೆದುಕೊಳ್ಳಬಾರದೆನಿಸಿತು. ಬಾಂಡೆಜಿಗೆ ಹೊಸ ರೂಪಗಳ ಮೂಲಕ ಕಟ್ಟಿ ಹಾಕಿ ಬಂಧಿಸಿಬಿಟ್ಟೆ.

ಲೈಫ್ ಗುರು ಆದ ಪರಿ

ಏಪ್ರಿಲ್ 12 ರಂದು ನಮ್ಮ ಕನ್ನಡ ತಂಡದ ಮುಖ್ಯಸ್ಥ ಎಲ್.ಪ್ರಕಾಶ್ ಲೈಫ್ ಸ್ಕಿಲ್ ತರಬೇತಿ ಆಧಾರಿತ YouTube ವಿಡಿಯೋ ಶೂಟಿಂಗ್ ಮಾಡಲು ಕೇಳಿದಾಗ ಕೊಂಚ ವಿಚಲಿತನಾದೆ. ಜಾಯ್ ಫುಲ್ ಲಿವಿಂಗ್ ಪರಿಕಲ್ಪನೆಗೆ ದೃಶ್ಯ ರೂಪಕ್ಕೆ ಇಳಿಸುವ ಯೋಜನೆ ನನ್ನ ಬಳಿಯಿರಲಿಲ್ಲ.
ಆದರೂ ಪ್ರಾಯೋಗಿಕವಾಗಿ ಐದು ಎಪಿಸೋಡ್ ಕೊಟ್ಟು ಬಂದೆ. ಅದಕ್ಕೆ ಪೂರಕವಾಗಿರುವ ಹೆಸರು, ಎಡಿಟಿಂಗ್, ಹಿನ್ನೆಲೆ ಸಂಗೀತದ ಅಗತ್ಯ ಇತ್ತು.
ಕ್ಯಾಮರಾಮನ್ ರಂಜಿತ್, ಎಡಿಟರ್ ಅನಿಲ್ ಮತ್ತು ಮುಖ್ಯಸ್ಥ ಪ್ರಕಾಶ್ ಕೂಡಿಕೊಂಡು ಲೈಫ್ ಗುರು ಎಂದಾಗ ಬೇಡ ಎನಿಸಿತು.
ಮುಂದೆ ಉತ್ಸಾಹಿ ಯುವಕರಿಗೆ ನಿರಾಶೆ ಮೂಡಿಸದೇ ಒಪ್ಪಿಕೊಂಡೆ.
ಲೈಫ್ ಗುರು ಸತತವಾಗಿ ನಲ್ವತ್ತು ಎಪಿಸೋಡ್ ಪ್ರಸಾರವಾಗಿ ದಡ ಮುಟ್ಟಿದಾಗ ನಿಟ್ಟುಸಿರು ಬಿಟ್ಟೆ.
ದಣಿವರಿಯದೆ ಓಡಿದಂತೆ ಭಾಸವಾಯಿತು.

 

 

ಲಕ್ಷಾಂತರ ವೀಕ್ಷಕರಿಗೆ ತಲುಪಿದ ಮೇಲೆ ಕೊಂಚ ವಿರಾಮ ಬೇಕೆನಿಸಿತು. ಆದರೆ ಮಿಲಿಯನ್ ಗಟ್ಟಲೆ ವೀಕ್ಷಕರು ಮೆಚ್ಚಲು ಹೇಗಿದ್ದರೆ ಛಂದ ಎಂಬ ಚಿಂತನೆ ಮುಂದುವರೆದಿದೆ. ಉತ್ಸಾಹಿ ಯುವಕರ ಮೌಲಿಕ ಬದ್ಧತೆಗಾಗಿ ಬೆರಗಾಗಿ ಹೋದೆ. ಕ್ಯಾಮರಾ, ಎಡಿಟಿಂಗ್ ಎಲ್ಲದರಲ್ಲೂ ಪರಿಪೂರ್ಣತೆ.

ಲೈಫ್ ಗುರು ಎಂದು ಕರೆದ ಮುಜುಗರ ಮಾಯವಾಗಲು ನಮ್ಮ ಕನ್ನಡ ತಂಡದ ಯುವಕರು ಕಾರಣರಾಗಿ ನನ್ನ ಆತ್ಮವಿಶ್ವಾಸ ಹೆಚ್ಚಿಸಿದರು. ಲೈಫ್ ಗುರು ಖ್ಯಾತಿ ಅನೇಕ ಬೆಳವಣಿಗೆಗೆ ಕಾರಣವಾಯಿತು.

ಅನೇಕ ತರಬೇತಿ ಕಾರ್ಯಕ್ರಮಗಳ ನೆಪ ಇಟ್ಟುಕೊಂಡು ರಾಜ್ಯದ ತುಂಬ ಸಂಚರಿಸಿದೆ. ಲೈಫ್ ಗುರು ಟ್ಯಾಗ್ ಅಂಟಿಸಿಕೊಳ್ಳಲು ಒಂಥರಾ ಖುಷಿ ಮತ್ತು ಆತ್ಮವಿಶ್ವಾಸ. ಬಿಡುವಾದಾಗ ಬಸವ ಟಿವಿಗೂ ಹಾಜರಾಗುತ್ತಿದ್ದೆ.

ಬೀದರಿನಲ್ಲಿ ಅಕ್ಕ ಅನ್ನಪೂರ್ಣ ಅವರು ಆಯೋಜಿಸಿದ್ದ ವಚನ ವಿಜಯೋತ್ಸವ ಅದ್ಭುತ ಅನುಭವ ನೀಡಿತು.
ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಕರೆದ ಸಮ್ಮೇಳನಗಳಿಗೂ ಹಾಜರಿ ಹಾಕಿದೆ.

 

 

ಹೀಗೆ ಹಲವಾರು ಚಟುವಟಿಕೆಗಳಲ್ಲಿ ಚದುರಿ ಹೋಗುವುದು ಬೇಡ ಎನಿಸುತ್ತಿತ್ತು, ಏನಾಗಬೇಕೆಂಬುದ ಬೇಗ ನಿರ್ಧರಿಸುವ ತುಡಿತ ಇಮ್ಮಡಿಸಿತು. ನಮ್ಮೂರು ಕಾರಟಗಿ ತಾಲೂಕೆಂದು ಘೋಷಣೆಯಾಗಿತ್ತು.
ಕಸಾಪ ನನ್ನ ಚಟುವಟಿಕೆಗಳನ್ನು ಗಮನಿಸಿತ್ತು. ಅಡಗಿ ಕುಳಿತ ಕವಿತೆಗಳಿಗೆ ಪುಸ್ತಕ ರೂಪ ಕೊಡಬೇಕಿತ್ತು.
ಈ ಮಧ್ಯ ಲೈಫ್ ಗುರು ಜನಪ್ರಿಯತೆ ಇಟ್ಟುಕೊಂಡು ಆತ್ಮಚರಿತ್ರೆ ಬರಲಿ ಎಂದು ಕೆಲವರು ಬಯಸಿದರು.
ಯಾಕೋ ಈಗಲೇ ಬೇಡವೆನಿಸಿತು.

ಬ್ಯಾಸರಿಲ್ಲದ ಜೀವ

ಆದರೆ ವೈಯಕ್ತಿಕವಾಗಿ ನನ್ನೊಂದಿಗೆ ಜುಗಲ್ ಬರೆಯಲು ಮನಸು ಮಾಡಿದ್ದ ಸಿಕಾ ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ ಬ್ಯಾಸರಿಲ್ಲದ ಜೀವ ಜೀವ ಚಿತ್ರ ಬರೆಯುತ್ತೇನೆಂದಾಗ ಸಂತೋಷದಿಂದ ಒಪ್ಪಿಕೊಂಡೆ.

 

 

ಅವರು ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ, ಪ್ರೀತಿಯಿಂದ ಮಾಡುತ್ತಾರೆಂಬ ಭರವಸೆಯೂ ಇತ್ತು.
ಬರಹ ಒಪ್ಪಿಕೊಂಡಷ್ಟು ಸುಲಭವಲ್ಲ, ಬಹುದೊಡ್ಡ ಬದ್ಧತೆಯೂ ಬೇಕಾಗುತ್ತದೆ.
ನನ್ನ ಮೇಲಿನ ಗೌರವ ಮತ್ತು ಬರಹದ ಮೇಲಿನ ಅವರ ಪ್ರೀತಿಗಾಗಿ ಕೇವಲ ಮೂರೇ ತಿಂಗಳಲ್ಲಿ ಇದು ಸಾಧ್ಯವಾಯಿತು. ಸರಿಸುಮಾರು ಮೂವತ್ತೈದು ಸಾವಿರ ಪದಗಳಲ್ಲಿ ನನ್ನ ಬದುಕನ್ನು ಕಟ್ಟಿಕೊಟ್ಟರು.

ಅನೇಕ ಬಾರಿ ನನ್ನ ನಾ ಕೇಳಿಕೊಳ್ಳುತ್ತೇನೆ. ನಾನೆಷ್ಟು ಸಾಚಾ?
ಖಂಡಿತವಾಗಿ ಅನೇಕ ಹೇಳಲಾರದ ಸಂಗತಿಗಳು ನಮ್ಮೊಳಗೆ ಉಳಿದು ಬಿಡುತ್ತವೆ.
ಓದಿದ ಅನೇಕ ಜೀವನ ಚರಿತ್ರೆಗಳ ಮೆಲುಕು ಹಾಕಿದೆ. ಓದುಗರಿಗೆ ಸ್ಪೂರ್ತಿ ನೀಡದಿದ್ದರೆ ಬರೆಯುವ ಅಗತ್ಯವಿಲ್ಲ ಅನಿಸಿತು. ಆದರೆ ಲೈಫ್ ಗುರು ನೋಡಿದವರು ನಾನು ಸ್ವಲ್ಪ ಮಟ್ಟಿಗೆ ಸ್ಪೂರ್ತಿ ತುಂಬ ಬಲ್ಲೆ ಎಂಬ ಭರವಸೆ ಕೊಟ್ಟಾಗ ಸಮಾಧಾನವಾಯಿತು. ಅಸಂಗತ ಬರಹಗಳು ಪುಸ್ತಕದ ಕೆಲವು ಅಧ್ಯಾಯಗಳ ಆಧರಿಸಿ ಬರೆದು ಮುಗಿಸಿದ ಮೇಲೆ ಪ್ರಶ್ನೆಗಳ ಮೂಲಕ ಅಭಿಪ್ರಾಯ ಸಂಗ್ರಹಿಸಲಾರಂಭಿಸಿದರು.

 

 

ಪರಸ್ಪರ ಭೇಟಿ, ಮಾತುಕತೆ ನಮಗೆ ಸಾಧ್ಯವಾಗಲಿಲ್ಲ.‌ ಇಲ್ಲಿಯೂ ನಮಗೆ ನೆರವಾದದ್ದು ಇದೇ ಜಂಗಮವಾಣಿ ಮತ್ತು ಜಾಲತಾಣ. ಸಾರ್ವಜನಿಕವಾಗಿ ತುಂಬ ಸೌಮ್ಯ ಮತ್ತು ಸಹನೆಯ ಮುಖವಾಡ ಹೊತ್ತಿರುವ ನಾನು ಆತ್ಮೀಯರೊಂದಿಗೆ ವೈಯಕ್ತಿಕವಾಗಿ ಕೊಂಚ ಮುಂಗೋಪಿ. ಸ್ವಲ್ಪ ಕಿರಿಕಿರಿ.
ರೇಖಾ ‘ನೀ ಭಾಳ ಕಿಟಿಕಿಟಿ ಮಾರಾಯ’ ಎಂಬ ಬಿರುದು ನೀಡುತ್ತಲೇ ಇರುತ್ತಾಳೆ.

ಕೆಲವೊಮ್ಮೆ ಪರಫೆಕ್ಷನ್ ಹೆಸರಿನಲ್ಲಿ ಸಹನೆ ಕಳೆದುಕೊಂಡು ಬಿಡುತ್ತೇನೆ.
ಸಿಕಾ ಅವರು ನನ್ನ ಕಿರಿಕರಿ ಸಹಿಸಿಕೊಳ್ಳಲಾಗದೆ ಒದ್ದಾಡಿದರು.
ಅವರ ಪಾಲಿಗೆ ನಾನು ಹಟಮಾರಿ ಮಗುವಾಗಿ ಬಿಸಿ ತುಪ್ಪವಾದೆ.

ಹೇಳಲಾಗದ ಸಂಗತಿಗಳನ್ನು ಬರೆದು ಕಳಿಸಲಾರಂಭಿಸಿದೆ.
ಜೀವನ ಚರಿತ್ರೆ ಬರೆಯುವವರು ಜೀವಕ್ಕೆ ಹತ್ತಿರವಾಗಿ ವೈಯಕ್ತಿಕ ದೌರ್ಬಲ್ಯಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ.

ನಮ್ಮ ಬದುಕಿನ ಕೆಲವು ಅಸಹನೀಯ ಸಂಗತಿಗಳನ್ನು ಕೇಳಿಸಿಕೊಳ್ಳಲಾಗುವುದಿಲ್ಲವಾದರೂ ಕೇಳಿಸಿಕೊಳ್ಳಬೇಕು.
ಅಂತಹ ಮುಜುಗರ ಸಹಿಸಿಕೊಂಡು, ರೋಸಿ ಹೋದರೂ ಬರೆಯುವುದು ಮುಗಿದಾಗ ಸಂತೃಪ್ತಿಯ ನಗೆ ಚಲ್ಲಿದರು.
ರೇಜಿಗೆ ಮಾಯವಾದ ಸಡಗರ ಅವರದು.

 

ಇತ್ತೀಚಿಗೆ ಕಲಬುರ್ಗಿ ಪ್ರವಚನದಲ್ಲಿ ಭೇಟಿಯಾಗಿದ್ದ ಪೂಜ್ಯ ಅಕ್ಕ ಅನ್ನಪೂರ್ಣ ಅವರು ” ಸಿದ್ದು ಅಣ್ಣ ಅವರ‌ ಚರಿತ್ರೆ ಬರೆದು ಅವರಿಗೆ ಮರು ಜನ್ಮ ಕೊಟ್ಟ ಅವ್ವ ನೀ” ಅಂದಾಗ ನಾವಿಬ್ಬರೂ ಬೆರಗಾದೆವು.
ಹೆಣ್ಣಿನ ಬಗ್ಗೆ ಗೌರವ, ಪ್ರೀತಿ ಇಟ್ಟುಕೊಂಡ ನಾ ಭಾವುಕನಾಗಿ ಹೋದೆ.
ಅವರು ನಾ ಕೊಟ್ಟ ಹಿಂಸೆ ತಡಕೊಂಡದ್ದು ಸಾರ್ಥಕವೆನಿಸಿತು.

ಮೊದಲ ಸಂಕಲನ ಪ್ರಕಟಿಸಿದ ಸೃಷ್ಟಿ ನಾಗೇಶ್ ಲೈಫಾಯಣ ಪ್ರಕಟಿಸಿದರೆ, ನನ್ನ ಗುರುಗಳಾದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಮುನ್ನುಡಿ ಮತ್ತು ಸೋದರಿ ಡಾ.ಮೈತ್ರೇಯಿಣಿಗೌಡ ಅವರು ಬೆನ್ನುಡಿ ಬರೆದದ್ದು ಸುದೈವ. ನನ್ನ ಮರುಹುಟ್ಟಿಗೆ ಕಾರಣರಾದವರಿಗೆಲ್ಲ ಶರಣುಗಳು.

 

ನನಗೆ ನನ್ನದೇ ಆದ ಸ್ಪೇಸ್ ಒದಗಿಸಿದ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಎಫ್. ದಂಡಿನ,ರವಿ ದಂಡಿನ ಮತ್ತು ಡಾ.ಪುನೀತಕುಮಾರ ಅವರಿಗೆ ಕೃತಜ್ಞನಾಗಿದ್ದೇನೆ.

ವರ್ಷದುದ್ದಕ್ಕು ನನ್ನ ಚಟುವಟಿಕೆಗಳಿಗೆ ಶ್ರೀ ರಕ್ಷೆಯಾಗಿರುವ ಮೆಂಟರ್ ಡಾ.ಆರ್.ಎಂ.ರಂಗನಾಥ ಸರ್,ಡಾ.ಜಿ.ಬಿ.ಪಾಟೀಲ್, ಕುಟುಂಬದ ನೊಗ ಹೊತ್ತ ಬಾಳ ಸಂಗಾತಿ ರೇಖಾ,ತಮ್ಮ ಪಾಡಿಗೆ ತಾವು ಖುಷಿಯಿಂದ ಅಧ್ಯಯನ ನಿರತರಾಗಿರುವ ಒಲುಮೆಯ ಚೇತನಗಳಾದ ಮುನ್ನುಡಿ, ಅಭಿವ್ಯಕ್ತಿ ಅವರಿಗೆ ಋಣಿಯಾಗಿದ್ದೇನೆ.
ನಿರಾಶಾದಾಯಕವಾಗಿರದ 2019 ಕ್ಕೆ ಗೌರವ ವಿದಾಯ ಹಾಡುವೆ.

#ಸಿದ್ದು_ಯಾಪಲಪರವಿ.

LEAVE A REPLY

Please enter your comment!
Please enter your name here