ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ

0
159

ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ.

 

 

ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ ವಿದ್ಯಾ ರಾಜು(60) ಎಂದು ಗುರುತಿಸಲಾಗಿದೆ. ಸಂಕಷ್ಟಕ್ಕೀಡಾಗಿರುವ ಜೀವರಾಶಿಗಳನ್ನು ಅದರಲ್ಲೂ ಹಾವುಗಳನ್ನು ರಕ್ಷಣೆ ಮಾಡುವಲ್ಲಿ ವಿದ್ಯಾ ರಾಜು ನಗರದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ. ವಿದ್ಯಾ ಅವರು 2002-2003ರಲ್ಲಿ ಈ ಕಾರ್ಯ ಆರಂಭಿಸಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.

 

 

ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ಹೆಬ್ಬಾವನ್ನು ವಿದ್ಯಾ ಅವರು ರಕ್ಷಣೆ ಮಾಡಿದ್ದಾರೆ. ಇತರೆ ನಾಲ್ವರು ಸಹಾಯದಿಂದ ಭಾರಿ ಗಾತ್ರದ ಹೆಬ್ಬಾವನ್ನು ಹಿಡಿದು ಅದನ್ನು ಚೀಲದೊಳಗೆ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಹಾವನ್ನು ಹಿಡಿಯುವಾಗ ವಿದ್ಯಾ ಅವರು ಇತರೆ ನಾಲ್ವರಿಗೆ ಸೂಚನೆಯನ್ನು ನೀಡುತ್ತಿರುವುದನ್ನು ಕೇಳಬಹುದಾಗಿದೆ. ಎರ್ನಾಕುಲಂ ಪ್ರದೇಶದಲ್ಲಿರುವ ಥರಂಗಿಣಿ ಅಪಾರ್ಟ್​ಮೆಂಟ್​ ಬಳಿ ಹಾವನ್ನು ಸೆರೆಹಿಡಿಯಲಾಗಿದೆ.

 

 

ಈ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ 50 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ಸಾಕಷ್ಟು ಮಂದಿ ಶೇರ್​ ಮಾಡಿದ್ದು, ವಿದ್ಯಾ ರಾಜು ಅವರ ಶ್ರಮ, ದಿಟ್ಟತನ ಹಾಗೂ ಹೆಬ್ಬಾವು ಹಿಡಿಯುವ ಸೂಕ್ಷ್ಮತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

LEAVE A REPLY

Please enter your comment!
Please enter your name here