ಶೇ.75ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು; ಸಿಎಂ ಜಗನ್

ಮಹತ್ವದ ಬೆಳವಣಿಗೆಯಲ್ಲಿ ಆಂಧ್ರ ಪ್ರದೇಶದ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಉದ್ಯೋಗಗಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲು ಎಂಬ ಕ್ರಾಂತಿಕಾರಿ ಕಾನೂನನ್ನು ಜಾರಿಗೆ ತಂದಿದ್ದಾರೆ.

ಹೌದು… ಆಂಧ್ರ ಪ್ರದೇಶದ ಔದ್ಯೋಗಿಕ ವಲಯದಲ್ಲಿ ಶೇ. 75ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವ ಮೂಲಕ ಕ್ರಾಂತಿಕಾರಿ ಕ್ರಮ ಜರುಗಿಸಿದೆ. ಈಗಾಗಲೇ ದಕ್ಷಿಣ ಭಾರತದ ರಾಜ್ಯಗಳಲ್ಲಿ ಔದ್ಯೋಗಿಕ ವಲಯದಲ್ಲಿ ಉತ್ತರ ಭಾರತೀಯರ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರ ರಾಜ್ಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲು ಎಂಬ ಕ್ರಾಂತಿಕಾರಿ ಕಾನೂನನ್ನು ಜಾರಿಗೆ ತಂದಿದೆ.

ಮೂಲಗಳ ಪ್ರಕಾರ ಆಂಧ್ರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ನೂತನ ಕಾನೂನಿನ ಪ್ರಕಾರ, ಖಾಸಗಿ ಸಂಸ್ಥೆ, ಕಾರ್ಖಾನೆ, ಜಂಟೀ ಸಹಭಾಗಿತ್ವದ ಕಂಪನಿಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಶೇ.75 ಉದ್ಯೋಗ ಮೀಸಲಾತಿ ಸಿಗಲಿದೆ. ಆ ಮೂಲಕ ಸ್ಥಳೀಯರಲ್ಲಿ ಕೌಶಲ್ಯ ಇಲ್ಲ ಎನ್ನುವ ಕಾರಣವೊಡ್ಡಿ ಕಂಪನಿಗಳು ಬೇರೆಯವರಿಗೆ ಮಣೆ ಹಾಕುತ್ತಿದ್ದವು. ಇಂತಹ ಜಾಣ ಕುರುಡು ನಡೆಗೆ ಆಂಧ್ರ ಪ್ರದೇಶ ಸರ್ಕಾರ ಬ್ರೇಕ್ ಹಾಕುವ ಕಾರ್ಯ ಮಾಡಿದೆ.

ಒಂದು ವೇಳೆ ಸ್ಥಳೀಯರಲ್ಲಿ ಕೌಶಲ್ಯ ಇಲ್ಲ ಎಂದಾದರೆ, ಸರ್ಕಾರದ ಸಹಭಾಗಿತ್ವದೊಂದಿಗೆ ಅವರಿಗೆ ತರಬೇತಿ ನೀಡಬೇಕು. ಈ ಮೂಲಕ ಅವರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು ಎಂದು ಸರ್ಕಾರ ಕಡ್ಡಾಯಗೊಳಿಸಿದೆ. ಆ ಮೂಲಕ ಆಂಧ್ರ ಪ್ರದೇಶ ಸರ್ಕಾರ ಉದ್ಯೋಗ ಕ್ಷೇತ್ರದಲ್ಲಿ ಸ್ಥಳೀಯರಿಗೆ ಇಷ್ಟು ದೊಡ್ಡ ಮಟ್ಟದ ಮೀಸಲಾತಿ ನೀಡಿದ ಮೊದಲ ರಾಜ್ಯ ಎನ್ನುವ ಕೀರ್ತಿಗೆ ಪಾತ್ರವಾಗಿದೆ.