ವಚನ – ೧೧ ಕಲ್ಯಾಣವೆಂಬ ಕೈಲಾಸದ ಬೆರಗು

0
293

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರಯ್ಯಾ ?
ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನಾ.

ಶಿವಮೊಗ್ಗ ಜಿಲ್ಲೆಯ ಉಡುತಡಿಯಿಂದ ಕಲ್ಯಾಣಕ್ಕೆ ಹೊರಟ ಅಕ್ಕನಿಗೆ ಶರಣರನ್ನು ಕಾಣುವ ತವಕ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರಿಂದಾಗಿ ಗುರು, ಲಿಂಗ, ಜಂಗಮ, ಕಾಯಕ, ದಾಸೋಹದ ಕುರಿತು ನಾಲ್ಕೂ ದಿಕ್ಕುಗಳಲ್ಲಿ ಹೂವಿನ ಸುಗಂಧದಂತೆ ಪಸರಿಸುತ್ತಲೇ ಹೋಯಿತು. ಅಂದು ಶರಣರು ನಡೆಯಲು ಮುಂದಾದ ಪ್ರಗತಿಯ ದಿವ್ಯ ಮಾರ್ಗವದು.

ಅಣ್ಣ ಬಸವಣ್ಣ ಮತ್ತು ಇತರ ಶರಣರೆಲ್ಲ ಸೇರಿ ನವ ಸಮಾಜ ನಿರ್ಮಾಣದಲ್ಲಿ ತೊಡಗಿರುವ ಸಂಗತಿಯು ಕರ್ಪೂರದ ಸುಗಂಧದಂತೆ ಎಲ್ಲೆಡೆ ಹಬ್ಬುತ್ತಲೇ ಇತ್ತು. ಅಂತಹ ಶರಣರ ತಾಣದ ದರುಶನ ಭಾಗ್ಯಕ್ಕಾಗಿ ಅಕ್ಕನ ಮನ ಹಾತೊರೆಯುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ಆ ಪುಣ್ಯ ಭೂಮಿ ಹೇಗಿರಬಹುದು? ಎಲ್ಲಾ ಶರಣರನ್ನು ಇದಿರಾಗುವುದು ಯಾವಾಗ? ಅವಳು ಇಂತಹ ಅನೇಕ ಪ್ರಶ್ನೆಗಳೊಂದಿಗೆ ಕಲ್ಯಾಣದ ಎಲ್ಲಾ ವಿಷಯಗಳನ್ನೂ ತಿಳಿದಿದ್ದಳು. ಅಲ್ಲಿ ಎಲ್ಲಾ ಅನುಭಾವಿಗಳೊಂದಿಗೆ ಒಂದಿಷ್ಟು ಸಮಯ ಕಳೆಯಬೇಕೆನ್ನುವ ತೀವ್ರ ಹಂಬಲದ ಜ್ಞಾನ ದಾಹ.

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು

ಇಂದು ಬೀದರ ಜಿಲ್ಲೆಯಲ್ಲಿರುವ ಬಸವ ಕಲ್ಯಾಣ ತಾಲೂಕು, ಅಂದಿನ ಶರಣರು ನಡೆದಾಡಿದ ಐತಿಹ್ಯದ ಕಲ್ಯಾಣ.

ಕಲ್ಯಾಣ ಎಂದರೆ ನಿಘಂಟುವಿನ ಪ್ರಕಾರ ಒಳಿತು, ಶುಭ, ಚಿನ್ನ, ಹೊನ್ನು, ಮದುವೆ, ವೈಭವ, ಚೆಲುವಾದ, ಮಂಗಳಕರ. ಹೀಗೆ ಈ ಶಬ್ದಕ್ಕೆ ನಾನಾ ಅರ್ಥಗಳಿದ್ದರೂ ಎಲ್ಲವೂ ಸಮಂಜಸವಾದುದೇ ಆಗಿದೆ.

ಬಸವಣ್ಣನವರ ಕಾಲದಲ್ಲಿ ಅವರು ಬಿಜ್ಜಳ ಮಹಾರಾಜನ ಪ್ರಧಾನಿಯಾಗಿ, ರಾಜವೈಭವವಿದ್ದು ಸಿರಿತನದಿಂದ ಕೂಡಿದ ಸಂಪದ್ಭರಿತ ನೆಲವಾಗಿತ್ತು. ಕಲ್ಯಾಣ ಎನ್ನುವುದಕ್ಕೆ ಶರಣರ ನಡೆ ನುಡಿ ಮತ್ತು ಶ್ರೀಮಂತಿಕೆಯ ಅರ್ಥವತ್ತಾದ ಹಿನ್ನೆಲೆ… ಜನಪದೀಯರು ರಚಿಸಿದ ತ್ರಿಪದಿಯು ಬಸವಣ್ಣನವರ ಕಾರ್ಯವನ್ನು ಎತ್ತಿ ತೋರಿಸುವ ಸಾಕ್ಷಿಯೂ ಹೌದು.

ದಾಸೋಹಿ ಬಸವಣ್ಣ ದಾಸೋಹ ಕಲಿಸಿದ
ದೇಶ ದೇಶೆಲ್ಲ ಕೇಳುತಲಿ| ಹೊಸ ಮಾತ|
ಮಾಸಿದವು ವೇದ ಹುಸಿಯೆಂದು.

ಅಂದು ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಹೊಸ ಸಮಾಜ ಕಟ್ಟುವ ಕಾರ್ಯಕ್ಕೆ ಕೈ ಹಾಕಿದರು. ಹೊಸ ಆಲೋಚನೆ, ಹೊಸ ಚಿಂತನೆ, ಹೊಸ ನುಡಿ, ಹೊಸ ನಡೆಯನ್ನು ಜನರ ಮಧ್ಯೆ ಆಳವಾಗಿ ಬಿತ್ತುವ ಕೆಲಸಕ್ಕೆ ಮುಂದಾದರು. ಏಕದೇವೋಪಾಸನೆ, ವರ್ಣ ವರ್ಗ ಲಿಂಗ ಭೇದವನು ಅಳಿಸುವ ಪ್ರಯತ್ನ, ಹುಟ್ಟಿನಿಂದ ಜಾತಿಯಲ್ಲ ವೃತ್ತಿ ಮುಖ್ಯ, ಲಿಂಗ ಸಮಾನತೆ, ಲಿಂಗಾಯತ ಧರ್ಮ ಸ್ಥಾಪನೆ, ಹೀಗೆ ಹಲವಾರು ಯೋಜನೆ ಹಾಕಿಕೊಂಡು, ಅದೇ ನಿಟ್ಟಿನಲ್ಲಿ ರಾಜಕೀಯ, ಸಾಮಾಜಿಕ, ಸಾಹಿತ್ಯಿಕವಾಗಿ ಬದಲಾವಣೆ ಬಯಸಿದರು. ಅದಕ್ಕಾಗಿ ಹೋರಾಟಗಳನ್ನೂ ಮಾಡಿದರು.

ರಾಜಾಶ್ರಯದಲ್ಲಿ ಇದ್ದ ಸಾಹಿತ್ಯ ಸಾಮಾನ್ಯ ಜನರನ್ನು ತಲುಪಿತು. ಭಾಷೆ ಹಳೆಗನ್ನಡದಿಂದ ನಡುಗನ್ನಡಕ್ಕೆ ಸರಳೀಕೃತಗೊಂಡಿತು. ಅನುಭವ ಮಂಟಪದಲ್ಲಿ ಶರಣರೆಲ್ಲ ಒಂದಾಗಿ ವಿಷಯ ಚರ್ಚೆ ನಡೆದು, ವಚನಗಳಲ್ಲಿ ತಮ್ಮ ದಿನನಿತ್ಯದ ಅನುಭವ ಹಂಚಿಕೊಳ್ಳಲು ಆರಂಭಿಸಿದರು.

ಆಗ ಬಸವಣ್ಣನವರ ವಚನಗಳು ಮನೆ ಮಾತಾದವು. ಸರಳ ಭಾಷೆ ಎಲ್ಲಾ ವರ್ಗದವರನ್ನು ತನ್ನತ್ತ ಸೆಳೆಯುತ್ತ ಎಲ್ಲರೊಳು ಬೆರೆಯಿತು. ಅನೇಕಾನೇಕ ಶರಣರು ವಚನ ರೂಪದ ಸಾಹಿತ್ಯ ರಚಿಸತೊಡಗಿದರು. ವಚನ ಸಾಹಿತ್ಯದ ಭಂಡಾರವೇ ಸಿದ್ಧವಾಯಿತು. ವಚನದ ಸಾಲುಗಳು ಜನಜನಿತವಾದವು.

‘ದಯವೇ ಧರ್ಮದ ಮೂಲವಯ್ಯ’

‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’

‘ನುಡಿದರೆ ಮುತ್ತಿನ ಹಾರದಂತಿರಬೇಕು’

‘ಎನಗಿಂತ ಕಿರಿಯರಿಲ್ಲ’

‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯಾ’

ಹೀಗೆ ಎಲ್ಲರನ್ನೂ ನಮ್ಮ ಮನೆಯ ಮಗನೆಂದು ತಿಳಿದಾಗ, ಅನೇಕ ದಿಕ್ಕುಗಳಿಂದ ರಾಜ ಮಹಾರಾಜರು ಮತ್ತು ಸಾಮಾನ್ಯ ಜನರು ಶರಣ ತತ್ವಕ್ಕೆ, ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರು ಹೋಗಿ, ಕಲ್ಯಾಣದ ಕಡೆಗೆ ಹರಿದು ಬಂದರು. ‘All great people think alike.’ ಇದರರ್ಥದಂತೆ ಅಲ್ಲಿ ಸೇರಿದ ಶರಣರೆಲ್ಲರ ಆಲೋಚನಾ ಕ್ರಮ ಒಂದೇ ತೆರನಾಗಿತ್ತು. ಅರಿವು, ಆಚಾರ, ಲಿಂಗಾಂಗ ಸಾಮರಸ್ಯ, ಗುರು, ಜಂಗಮ, ದಾಸೋಹ, ಪ್ರಸಾದ ಮುಂತಾದ ವಿಷಯಗಳ ಕುರಿತು ಎಲ್ಲಾ ಶರಣರು ತಮ್ಮ ಅನುಭಾವದ ನೆಲೆಯಲ್ಲಿ ವಚನಗಳನ್ನು ರಚಿಸಿದರು. ‘ಕಾಯಕವೇ ಕೈಲಾಸ’ ಎನ್ನುವುದು ಮೂಲ ಮಂತ್ರವಾಗಿ ದುಡಿಮೆಯೆ ದೈವವಾಯಿತು.

ಇಂತಹ ಬಸವಾದಿ ಶರಣರ ಕುರಿತು ಕೇಳಿದ್ದ ಅಕ್ಕನಿಗೆ ಕಲ್ಯಾಣವು ಕೈಲಾಸಕ್ಕೆ ಸಮಾನವಾಗಿ ಕಾಣುವುದಷ್ಟೇ ಅಲ್ಲ ಕೈಲಾಸವೇ ಆಗಿತ್ತು.

ಒಳಗೂ ಕಲ್ಯಾಣ ಹೊರಗೂ ಕಲ್ಯಾಣ

ಅಕ್ಕ ದೇಹದ ಕುರಿತು ಸ್ಪಷ್ಟ ಚಿಂತನೆ, ಸ್ಪಷ್ಟ ನಿಲುವು ಹೊಂದಿದವಳು. ‘ಕಾಯ ಕರ್ರನೆ ಕಂದಿದಡೇನು ಕಾಯ ಮಿರ್ರನೆ ಮಿಂಚಿದಡೇನು’ ‘ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ’ ‘ಅಮೇಧ್ಯದ ಮಡಿಕೆ ಮೂತ್ರದ ಕುಡಿಕೆ ಎಲುವಿನ ತಡಿಕೆ ಕೀವಿನ ಹಡಿಕೆ’ ಹೀಗೆ ಅಕ್ಕ ತನ್ನ ಶರೀರದ ವ್ಯಾಮೋಹ ತೊರೆದು, ಕೌಶಿಕ ಮಹಾರಾಜನನ್ನು ಮೂರು ಶರತ್ತುಗಳಿಂದ ಪರಾಭವಗೊಳಿಸಿ, ರಾಜ ವೈಭವ ತೊರೆದು, ಕಲ್ಯಾಣದ ಹೆಬ್ಬಾಗಿಲಿಗೆ ಬಂದು ನಿಂತಾಗ, ಅಲ್ಲಿಯ ವಾತಾವರಣ ಕಂಡು ಅವಳಿಗನಿಸುವುದು, ಪ್ರತಿಯೊಬ್ಬರ ಕಾಯದ ಒಳಗೆ ಕಲ್ಯಾಣವಿರುವುದು, ಹಾಗೆ ಕಾಯದ ಹೊರಗೂ ಕಲ್ಯಾಣವಿದೆ.

ಈ ಮಾತಿನ ಸ್ಪಷ್ಟೀಕರಣಕ್ಕೊಂದು ಉದಾಹರಣೆ. ಅಡಿಗೆ ಮಾಡುವ ಪಾತ್ರೆ ಮತ್ತು ಅದರಲ್ಲಿ ತಯಾರಿಸುವ ಆಹಾರ ಕುರಿತು. ಮನೆಗೆ ಅತಿಥಿಗಳು ಬಂದಾಗ ನಾವು ಅವರಿಗಾಗಿಯೇ ವಿಶೇಷ ಅಡಿಗೆ ಮಾಡುತ್ತೇವೆ. ಅಡಿಗೆ ಮಾಡುವ ಪಾತ್ರೆಯ ಒಳಗೆ ಹೊರಗೆ ಶುದ್ಧವಾಗಿರುವಂತೆ ಜಾಗ್ರತೆ ವಹಿಸುತ್ತೇವೆ. ಒಳಗೆ ಅಶುದ್ಧಿ ಇದ್ದರೆ ಆಹಾರ ತಿನ್ನಲು ಯೋಗ್ಯವಾಗಿ ಉಳಿಯುವುದಿಲ್ಲ. ಹೊರಗೆ ಶುಚಿಯಾಗಿರದಿದ್ದರೆ, ನೋಡುವ ಕಣ್ಣಿಗೆ ಅಸಹ್ಯವೆನಿಸಿ, ಆ ಆಹಾರವನ್ನು ಸೇವಿಸಲು ಮನಸು ಒಪ್ಪುವುದಿಲ್ಲ. ಪ್ರಸಾದವೇ ಅಸಹ್ಯವೆನಿಸಿ ಬಿಡುವುದು. ಆ ಕಾರಣಕ್ಕಾಗಿ ನಾವು ಪ್ರಸಾದ ತಯಾರಿಸುವಾಗ ಆ ಎಲ್ಲಾ ಮುತುವರ್ಜಿಯನ್ನಿಟ್ಟುಕೊಂಡೇ ಮಾಡುತ್ತೇವೆ. ಬಂದ ಅತಿಥಿಗಳು ಸ್ವಚ್ಛ, ಶುಭ್ರ ಆಹಾರ ಸೇವಿಸಲೆಂದು ಬಯಸುತ್ತೇವೆ. ಇದು ಪಾತ್ರೆ ಮತ್ತು ಆಹಾರದ ಕತೆ.

ಅದೇ ರೀತಿ ಮನುಷ್ಯ ಮತ್ತು ಅವನೊಳಗೆ ಅಡಗಿರುವ ಸುಪ್ತ ಮನಸನ್ನು ಪರಿಗಣಿಸಿ ನೋಡಿದಾಗ, ಎರಡೂ ನಿರ್ಮಲವಾಗಿರುವುದು ಅಷ್ಟೇ ಮುಖ್ಯ. ವ್ಯಕ್ತಿಯ ಒಳಗಿರುವ ಮನಸು ಮತ್ತು ಹೊರಗೆ ಕಾಣುವ ಶರೀರ ಶುದ್ಧವಾಗಿರಲೇ ಬೇಕು. ಆಗ ಮಾತ್ರ ವ್ಯಕ್ತಿ, ಮನೆ, ಸಮಾಜ ಎಲ್ಲವೂ ಶುದ್ಧವಾಗಿರಲು ಸಾಧ್ಯ. ಈ ತರಹದ ಪರಿಶುದ್ಧ ವಾತಾವರಣ ಸೃಷ್ಟಿಸುವುದು ಹೇಗೆ? ಅದಕ್ಕೆ ಬಸವಣ್ಣನವರು ತಮ್ಮ ವಚನದಲ್ಲಿ ಹೇಳುತ್ತಾರೆ.

‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲಿ ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ’

ಹೀಗೆ ಬಸವಣ್ಣನವರ ಮಾರ್ಗದಲ್ಲಿ ಅಂದಿನ ಶರಣರ ಚಿಂತನೆ, ಜೀವನಾನುಭವ, ಬದುಕುವ ರೀತಿ ಸಾಗಿತ್ತು. ಇವೆಲ್ಲವುಗಳಿಂದಾಗಿ ಕಲ್ಯಾಣಕ್ಕೆ ಕೈಲಾಸದ ರೂಪುರೇಷೆ. ಶರಣ ತನ್ನ ಒಳಗಿರುವ ಮನಸು ಮತ್ತು ಹೊರಗೆ ಕಾಣುವ ಬಾಹ್ಯ ರೂಪು ಎರಡೂ ಕಲ್ಯಾಣದಂತಿರಬೇಕೆಂದರೆ, ಮನ ಶುದ್ಧ ದೇಹ ಶುಭ್ರವಾಗಿಸಿಕೊಳ್ಳುವುದೇ ಆಗಿದೆ.

ಇದರಂತುವನಾರು ಬಲ್ಲರಯ್ಯಾ?

ಈ ಮೇಲಿನ ಸಾಲನ್ನು ಬಿಡಿಸಿ ಓದಿದರೆ, ‘ಇದರ ಅಂತುವನು ಯಾರು ಬಲ್ಲರು ಅಯ್ಯಾ?’ ‘ಅಂತು’ ಎಂದರೆ ಗುಟ್ಟು. ಕಲ್ಯಾಣದಲ್ಲಿ ಎಲ್ಲೆಲ್ಲಿಂದಲೋ ಬಂದ ಶರಣರೆಲ್ಲಾ ಸೇರಿ, ತಮ್ಮ ತಮ್ಮ ಕಸುಬನ್ನೇ ಕಾಯಕವಾಗಿಸಿಕೊಂಡು, ಅದರಿಂದಲೇ ಗುರುತಿಸಿಕೊಂಡರು. ದುಡಿದದ್ದನ್ನು ದಾಸೋಹದಲ್ಲಿ ಸೇರಿಸಿ, ಮಹಾಮನೆಯಲ್ಲಿ ಪ್ರಸಾದ ಹಂಚಿ, ಅನುಭವ ಮಂಟಪದಲ್ಲಿ ವಿಚಾರ ವಿನಿಮಯ ಮಾಡಿಕೊಂಡು, ಸಮಾನತೆಯ, ಶಾಂತಿಯ, ಸೌಹಾರ್ದ ಬದುಕನ್ನು ನಡೆಸುತ್ತಿದ್ದರು. ಇಂತಹ ಶರಣರ ಬದುಕಿನ ಗುಟ್ಟನ್ನು ಯಾರು ಬಲ್ಲರು? ಎನ್ನುವ ಪ್ರಶ್ನೆ. ಕೈಲಾಸದಂತಿರುವ ಈ ಕಲ್ಯಾಣವು ಇಷ್ಟು ಸಮೃದ್ದವಾಗಿರಲು, ಶರಣ ಸಂಸ್ಕೃತಿ, ತತ್ವಗಳೇ ಕಾರಣ. ಅದೇ ಅದರ ಗುಟ್ಟು.

ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ

ಅಲ್ಲಿ ಮೇಲಿನ ಸಾಲಿನಲ್ಲಿ ಪ್ರಶ್ನೆ ಮಾಡಿದ ಅಕ್ಕ, ಮುಂದಿನ ನುಡಿಯಲ್ಲಿ ಅದರ ಸ್ಪಷ್ಟತೆ ನೀಡುವಳು. ಶರಣರು ಯಾರು? ಅವರಲ್ಲಿ ಸತ್ಯ ಎಷ್ಟರ ಮಟ್ಟಿಗೆ? ಅವರು ಯಾವ ಜಾಡಿನಲ್ಲಿ ಸಾಗಿದರು? ಅಕ್ಕನಿಗೆ ತನ್ನ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವುದು. ಅವಳಿಗೆ ಎಲ್ಲವೂ ನಿಖರವಾಗಿ ಕಾಣುವುದು. ಎಲ್ಲಾ ಶರಣರು ನಡೆಯುತ್ತಿರುವ ಮಾರ್ಗ ಸ್ಪಷ್ಟವಾಗಿ ಕಾಣುವುದು.

ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕ ಎನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.

ಶರಣರ ನಡೆ ನುಡಿ, ಆಚಾರ ವಿಚಾರ, ಅನುಭವ ಅನುಭಾವ, ಇವೆಲ್ಲವನ್ನೂ ಕೇಳಿ ತಿಳಿದುಕೊಂಡು ಅಕ್ಕ ಬಯಸುವಳು. ಇದಕ್ಕೆಲ್ಲಾ ಕಾರಣೀಭೂತರು ಬಸವಣ್ಣನವರು. ಉಡುತಡಿ ಅಷ್ಟೊಂದು ದೂರದಿಂದ ಬಂದು ಕಲ್ಯಾಣ ಊರ ಹೆಬ್ಬಾಗಿಲಲಿ ನಿಂತಾಗ, ಅವಳೊಳಗಿನ ನಿರೀಕ್ಷೆ ದ್ವಿಗುಣವಾಗುವುದು. ಬಸವಣ್ಣನವರನ್ನು ಯಾವಾಗ ನೋಡುವೆ? ಅವಳಲ್ಲಿ ಕುತೂಹಲ ಮೂಡಿರುವುದೆಂದು ಚೆನ್ನಮಲ್ಲಿಕಾರ್ಜುನನಲ್ಲಿ ನಿವೇದಿಸಿಕೊಳ್ಳುವಳು.

ಬಸವಣ್ಣ, ‘ವಿಶ್ವವೇ ನನ್ನ ಮನೆ ಮಾನವ ಜನಾಂಗವೇ ನನ್ನ ಕುಟುಂಬ’ ವೆಂದು ಕನಸು ಕಂಡವರು. ಇಡೀ ಮನು ಕುಲವನ್ನು ಒಂದೇ ಸೂರಿನಡಿಯಲ್ಲಿ ಕಾಣಲು ಬಯಸಿದವರು. ಅದು ಮುಂದೆ ಹೋಗಿ ಕ್ರಾಂತಿಗೆ ನಾಂದಿಯಾದ ವಿಷಯ ಅಂತ್ಯದಲ್ಲಿ ತಿಳಿದು ಬರುವುದು. ಇಂತಹ ಮಹಾಪುರುಷನ ದರ್ಶನಕ್ಕಾಗಿ ತುದಿಗಾಲಲ್ಲಿ ನಿಂತವಳು ಅಕ್ಕ ಮಹಾದೇವಿ.

ಅಕ್ಕನ ಈ ವಚನವನ್ನು ಪ್ರಸ್ತುತದ ನಮ್ಮ ಬದುಕಿಗೆ ಅಳವಡಿಸಿ ನೋಡಿದರೆ, ಅನೇಕಾನೇಕ ಬದಲಾವಣೆಗಳನ್ನು ಮಾಡಿಕೊಂಡು, ಪ್ರತಿನಿತ್ಯದ ಧಾವಂತಕ್ಕೆ ಒಂದು ಸಂತುಲತೆಯನ್ನು ಕಾಪಾಡಿಕೊಳ್ಳುವ ಹಂತವನ್ನು ತಲುಪಬಹುದು.

ನಾವು ವಾಸಿಸುವ ಮನೆ, ನೆಲೆಸಿರುವ ಊರು, ವೃತ್ತಿ ಮಾಡುವ ಸ್ಥಳಗಳಲ್ಲಿ ಕಲ್ಯಾಣದ ವಾತಾವರಣ ಬಯಸಿದರೇನೂ ತಪ್ಪಿಲ್ಲ. ಶಾಲಾ, ಕಾಲೇಜು, ಆಫೀಸುಗಳನ್ನು ಅನುಭವ ಮಂಟಪದಂತೆ ಮುಕ್ತವಾಗಿ ಚರ್ಚಿಸುವ ವೇದಿಕೆಯಾಗಿ ನಿರ್ಮಿಸುವ ಸಾಧ್ಯತೆಗಳಿವೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಒಳ ಹೊರಗನ್ನು ಕಲ್ಯಾಣವಾಗಿಸಿಕೊಳ್ಳುವ ದಾರಿಯಲ್ಲಿ ಸಾಗಬಹುದು. ಅಕ್ಕ ಹೇಳುವ ‘ಒಳಗೂ ಕಲ್ಯಾಣ ಹೊರಗೂ ಕಲ್ಯಾಣ’ ಮತ್ತು ‘ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’ ಬಸವಣ್ಣ ಹೇಳುವ ಈ ಮಾತಿನಲ್ಲೂ ಅದೇ ಮರ್ಮವಿದೆ.

ಕೈಲಾಸದಂತೆ ಕಾಣುವ ಶರಣರ ನೆಲವನ್ನು ಭಕ್ತಿಯಿಂದ ಸ್ಪರ್ಶಿಸಿ, ಕತೂಹಲದಿಂದ ಶರಣರು ನೆಲೆಸಿದ್ದ ಕಲ್ಯಾಣದ ಹೆಬ್ಬಾಗಿಲಲ್ಲಿ ನಿಂತ ಅಕ್ಕನ ಮನಸಿನ ಪ್ರತಿಬಿಂಬವೇ ಈ ವಚನ.

ಸಿಕಾ
(ಕಾವ್ಯಶ್ರೀ ಮಹಾಗಾಂವಕರ)

LEAVE A REPLY

Please enter your comment!
Please enter your name here