ಮಂಡ್ಯ ಜಿಲ್ಲೆ ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರಾದಂತೆ, ಅನೇಕ ಪೌರಾಣಿಕ ಹಿನ್ನಲೆಯ ಕಥನಗಳಿಗೂ ಸಾಕ್ಷಿಯಾಗಿದೆ. ಹೌದು, ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಇಂತಹ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಮುತ್ತತ್ತಿ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು ಪ್ರದೇಶವಾಗಿದೆ ಎಂಬ ಪ್ರತೀತಿ ಇದೆ.
ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ. ಮುತ್ತತ್ತಿಯಲ್ಲಿ ಪ್ರಸಿದ್ಧವಾದ ಹನುಮಾನ ಮಂದಿರವಿದೆ. ರಾಮಾಯಣದಲ್ಲಿ ರಾಮನ ವನವಾಸದ ಕಾಲಘಟ್ಟದಲ್ಲಿ ಈ ಪ್ರದೇಶಕ್ಕೆ ರಾಮನು ಭೇಟಿ ಕೊಟ್ಟಿದ್ದನು ಎನ್ನುವ ಕಥೆಗಳಿವೆ. ಇನ್ನು ಈ ಗ್ರಾಮ ಪ್ರಾಕೃತಿಕ ಸೌಂದರ್ಯಕ್ಕೂ ಹೆಸರಾಗಿದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಸಣ್ಣ ಹಳ್ಳಗಳು, ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ. ಒಂದರ ಮೇಲೊಂದರಂತೆ ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಕೋಣ, ಕಾಡುಹಂದಿ, ವಿವಿಧ ತಳಿಯ ಅಳಿಲು, ಜಿಂಕೆ, ಸಾಂಬಾರ್ ಮುಂತಾದ ಪ್ರಾಣಿಗಳು ಈ ಕಾಡಿನಲ್ಲಿ ನೆಲೆಸಿವೆ. ಸುಂದರ ಪ್ರಾಕೃತಿಕ ಸೌಂದರ್ಯದೊಂದಿಗೆ ಚಾರಣಪ್ರಿಯರಿಗೆ ಸಂತಸ ಮೂಡಿಸುತ್ತದೆ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಈ ಅರಣ್ಯದಲ್ಲಿ ಪ್ರವಾಸಿಗರು ಚಾರಣ ಕೈಗೊಳ್ಳಬಹುದು.