ದೇವರುಗಳಿಗೆ ಮುಡಿಯ ಹರಕೆ ಮಾಡಿಕೊಳ್ಳುವುದು ಸಾಮಾನ್ಯ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮುಡಿಯ ಹರಕೆ ಹೊತ್ತಿಕೊಳ್ಳುತ್ತಾರೆ. ತಮಗೆ ಅನುಕೂಲವಾದ ವೇಳೆ ದೇವಸ್ಥಾನಗಳಿಗೆ ತೆರಳಿ ಮುಡಿಕೊಟ್ಟು ಬರುತ್ತಾರೆ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಈ ಸಂಪ್ರದಾಯವನ್ನು ಇಟ್ಟುಕೊಂಡಿರುತ್ತಾರೆ. ಇಲ್ಲಿ ಮಹಿಳೆಯರು, ಮಕ್ಕಳು ಕೂಡ ಸೇರಿರುತ್ತಾರೆ. ಅದರಲ್ಲೂ ತಿರುಪತಿ ಎಂದಾಕ್ಷಣ ಮುಡಿ ಕೊಡುವವರ ಸಂಖ್ಯೆ ಲಕ್ಷಗಟ್ಟಲೇ ಇರುತ್ತದೆ.
ತಿರುಪತಿ ತಿಮ್ಮಪ್ಪನಿಗೆ ಮುಡಿಯ ಹರಕೆ ಹೊತ್ತುಕೊಂಡು ಲಕ್ಷಾಂತರ ಜನರು ದೇವಸ್ಥಾನಕ್ಕೆ ಭೇಟಿ ನೀಡಿ ಕೂದಲನ್ನು ದೇವರಿಗೆ ಅರ್ಪಿಸುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಈ ರೀತಿ ಕೂದಲು ಕೊಟ್ಟ ನಂತರ ಕೂದಲನ್ನು ಏನು ಮಾಡುತ್ತಾರೆ? ಕೂದಲು ಹೇಗೆಲ್ಲಾ ವಿಲೇವಾರಿಯಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಈ ಕುರಿತು ಇಂಟೆರೆಸ್ಟಿಂಗ್ ಮಾಹಿತಿಯೊಂದನ್ನು ನಿಮಗೆ ನೀಡುತ್ತಿದ್ದೇವೆ.
ಮುಡಿ ಹರಕೆಗೂ ತಿರುಪತಿ ತಿಮ್ಮಪ್ಪನಿಗೂ ನೇರ ಸಂಬಂಧ!?
ಮುಡಿ ಹರಕೆ ಮತ್ತು ತಿರುಪತಿ ತಿಮ್ಮಪ್ಪನಿಗೂ ನೇರವಾದ ಸಂಬಂಧವಿದೆ. ಈ ಸಂಬಂಧ ಪುರಾಣಗಳು ಹೀಗೆ ಹೇಳುತ್ತವೆ. ತಿರುಮಲ ಬೆಟ್ಟದ ಒಂದು ಹುತ್ತದೊಳಗೆ ಶ್ರೀನಿವಾಸ ಬಳಲಿ ಬಾಯಾರಿ ಕುಳಿತಿರುತ್ತಾರೆ. ಆಗ ಹಸುವೊಂದು ಬಂದು ಹಾಲೆರೆಯುತ್ತಿರುತ್ತದೆ. ಚೋಳ ಅರಸರ ಹಸುಗಳಲ್ಲಿ ಆ ಹಸುವೂ ಒಂದಾಗಿರುತ್ತದೆ. ಅಲ್ಲದೇ, ಹಸುಗಳನ್ನು ಮೇಯಿಸಲು ವ್ಯಕ್ತಿಯೊಬ್ಬನನ್ನು ನೇಮಿಸಲಾಗಿರುತ್ತದೆ.
ಕಾಮಧೇನು ಎಂಬ ಹೆಸರಿನ ಹದು ನಿತ್ಯ ಹಾಲು ಕೊಡುತ್ತಿರಲಿಲ್ಲ. ಇದರಿಂದ ದನ ಕಾಯುವವನಿಗೆ ಅನುಮಾನ ಬರಲು ಆರಂಭವಾಯಿತು. ಅಲ್ಲದೇ, ಇದರ ಅಸಲಿ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಉಂಟಾಗುತ್ತದೆ. ಹಾಗಾಗಿ ಹಸು ಕೊಡದಿರುವ ಹಿಂದಿನ ರಹಸ್ಯವೇನು ಎಂದು ತಿಳಿದುಕೊಳ್ಳುವ ಸಲುವಾಗಿ ಕಾಮಧೇನು ಎಂಬ ಹಸುವನ್ನು ಒಂದು ದಿನ ಹಿಂಬಾಲಿಸುತ್ತಾ ಬರುತ್ತಾನೆ.
ಆಗ ಕಾಮಧೇನು ಶ್ರೀನಿವಾಸನಿಗೆ ಹಾಲು ಕೊಡುತ್ತಿರುವುದನ್ನು ನೋಡಿ, ತನ್ನ ಕೈಯಲ್ಲಿದ್ದ ಕೊಡಲಿಯಿಂದ ಹಸುವಿಗೆ ಹೊಡೆಯುತ್ತಾನೆ. ಹಸುವಿಗೆ ಹೊಡೆದ ಏಟು ತಪ್ಪಿ ಶ್ರೀನಿವಾಸನಿಗೆ ಬೀಳುತ್ತದೆ. ಕೊಡಲಿ ತಾಗಿ ತಲೆಯ ಭಾಗದ ಕೂದಲು ಹಾರಿ ಹೋಗುತ್ತದೆ. ಆಗ ಶ್ರೀನಿವಾಸನ ಪರಮ ಭಕ್ತೆಯಾದ ನೀಲಾದೇವಿ ತನ್ನ ತಲೆಕೂದಲನ್ನು ಕತ್ತರಿಸಿ ಶ್ರೀನಿವಾಸನಿಗೆ ಜೋಡಿಸುತ್ತಾಳೆ. ನೀಲಾದೇವಿಯ ಭಕ್ತಿ ಹಾಘೂ ಕೆಲಸಕ್ಕೆ ಮೆಚ್ಚಿ ಶ್ರೀನಿವಾಶ ವರ ಕೊಡುತ್ತಾನೆ.
ಕಲಿಯುಗದಲ್ಲಿ ಭಕ್ತರು ನನ್ನ ಕ್ಷೇತ್ರಕ್ಕೆ ಬಂದು ಮುಡಿಯನ್ನು ಕೊಡುತ್ತಾರೆ. ಆಗ ಆ ಮುಡಿಗಳು ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು ಹೇಳುತ್ತಾನೆ. ಈ ಹಿನ್ನಲೆಯಲ್ಲು ಭಕ್ತರು ಈಗಲೂ ತಿರುಪತಿ ತಿಮ್ಮಪ್ಪನಿಗೆ ತಮ್ಮ ತಲೆ ಕೂದಲನ್ನು ಅರ್ಪಿಸುತ್ತಾರೆ ಎಂದು ಪುರಾಣದ ಕಥೆಗಳು ಹೇಳುತ್ತವೆ.
ತಿಮ್ಮಪ್ಪನ ತಲೆಯಲ್ಲಿ ಈಗಲೂ ಇದೆ ಗಾಯದ ಗುರುತು:
ಹೌದು, ನೀಲಾದೇವಿ ಜೋಡಿಸಿದ ಕೂದಲು ಈಗಲೂ ಪರಮಾತ್ಮನ ತಲೆಯ ಹಿಂಭಾಗ ಇದೆ. ದೇವಸ್ಥಾನದ ಆರಂಭದಲ್ಲಿ ಮಹಾದ್ವಾರದ ಬಲಗಡೆ ತಿಮ್ಮಪ್ಪನ ಮೂರ್ತಿಯ ತಲೆಯಲ್ಲಿ ಗಾಯದ ಗುರುತುಗಳಿವೆ ಎಂದು ಹೇಳಲಾಗುತ್ತದೆ. ಹಾಗಾಗಿ ಶ್ರೀನಿವಾಸನ ತಲೆಯ ಆ ಭಾಗದಲ್ಲಿ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡ ನಡೆದುಬಂದಿದೆ. ಜನರು ತಮ್ಮ ಇಷ್ಟಾರ್ಥ ಸಿದ್ಧಿಸಲಿ ಎಂಬ ಕಾರಣಕ್ಕಾಗಿ ತೀರ್ಥಯಾತ್ರೆ ಮಾಡುತ್ತಾರೆ. ಜೊತೆಗೆ ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ.