ಎನ್ ಡಿ ಆರ್ ಎಫ್ ಸಿಬ್ಬಂದಿಯ ಸಾಹಸ ; ಬೋಟ್ ನಲ್ಲಿ ಮಹಿಳೆಗೆ ಹೆರಿಗೆ !

ಮಳೆಯ ಆರ್ಭಟದಿಂದ ಬಿಹಾರ ತತ್ತರಿಸುತ್ತಿದೆ.. ಭೀಕರ ಮಳೆಗೆ ಬಿಹಾರ ಪ್ರವಾಹದ ತುತ್ತ ತುದಿಯಲ್ಲಿದೆ

ಇಲ್ಲಿನ ಮೋತಿಹರಿ ಪ್ರದೇಶದಲ್ಲಿ ಎನ್​ಡಿಆರ್​ಎಫ್​​ ರಕ್ಷಣಾ ಕಾರ್ಯಾಚರಣೆ ಬೋಟ್​​ನಲ್ಲೇ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಮೋತಿಹರಿಯ ಗೋಬ್ರಿ ಗ್ರಾಮದ ಸಬೀನಾ ಖತೂನ್​ ಎಂಬ 41 ವರ್ಷದ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಕುಟುಂಬಸ್ಥರು ಹತ್ತಿರದ ಪ್ರಾಥಾಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಅದೇ ವೇಳೆಗೆ ಅಧೀನ ಸಬ್​ ಇನ್ಸ್​ಪೆಕ್ಟರ್​ ವಿಜಯ್​ ಝಾ ನೇತೃತ್ವದ ಎನ್​ಡಿಆರ್​ಎಫ್​ನ ಉಪ ತಂಡ ಪ್ರವಾಹಪೀಡಿತ ಬಜಾರಿಯಾ ಪ್ರದೇಶದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿತ್ತು.

ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಪಡೆದ ಈ ರಕ್ಷಣಾ ತಂಡ, ಕೂಡಲೇ ಸ್ಥಳಕ್ಕೆ ಧಾವಿಸಿದೆ.

ಮೋಟರ್​ ಬೋಟ್​​ನಲ್ಲಿ ಸಬೀನಾರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಎನ್​ಡಿಆರ್​ಎಫ್​​ ತಂಡ ತಯಾರಿ ನಡೆಸಿತ್ತು. ತಂಡದಲ್ಲಿ ರಾಣಾ ಪ್ರತಾಪ್​ ಯಾದವ್​ ಎಂಬ ನರ್ಸ್​ ಕೂಡಾ ಇದ್ದರು. ಆದರೆ ಮಹಿಳೆಗೆ ವಿಪರೀತ ನೋವು ಕಾಣಿಸಿಕೊಂಡ ಪರಿಣಾಮ ಪರಿಸ್ಥಿತಿ ಅರಿತ ಎನ್​ಡಿಆರ್​ಎಫ್​ ತಂಡ ಮಹಿಳೆಗೆ ಬೋಟ್​​ನಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಿದೆ. ಸದ್ಯ ಸಬೀನಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತಾಯಿ ಹಾಗೂ ಮಗುವನ್ನು ಬಜಾರಿಯಾದ ಆಸ್ಪತ್ರೆಗೆ ದಾಖಲಿಸಲಾಗಿದೆ