ಇಸ್ರೋ ಇಲ್ಲದಿದ್ದರೆ ಏನಾಗ್ತಿತ್ತು ಗೊತ್ತಾ ಭಾರತ?

0
205

ಭಾರತದ ಘನತೆಯನ್ನು ವಿಶ್ವ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಸಂಸ್ಥೆಗಳಲ್ಲಿ ಇಸ್ರೋ ಕೂಡ ಒಂದು. ಈ ಸಂದರ್ಭದಲ್ಲಿ ಇಸ್ರೋ ಸಂಬಂಧ ಎರಡು ವಿಚಾರಗಳನ್ನು ನೆನಪು ಮಾಡಿಕೊಳ್ಳಬೇಕು. ಇಸ್ರೋ ಸಂಸ್ಥೆ ಪ್ರಾರಂಭವಾಗಿ 2019ಕ್ಕೆ 50 ವರ್ಷಗಳು ಕಳೆಯುತ್ತದೆ ಎಂಬುದು ಒಂದಾದರೆ ಮತ್ತೊಂದು ಜುಲೈ 22ರಂದು ಚಂದ್ರಯಾನ-2 ನ್ನು ಯಶಸ್ವಿಯಾಗಿ ನಭಕ್ಕೆ ಹಾರಿಸುವ ಮೂಲಕ ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತೆ ಮಾಡಲಾಯಿತು.
ಹಾಗಾದರೆ, ಇಸ್ರೋ ಸಂಸ್ಥೆ ಕಳೆದ 50 ವರ್ಷಗಳಲ್ಲಿ ಏನೆಲ್ಲಾ ಸಾಧನೆ ಮಾಡಿದೆ, ಯಾವೆಲ್ಲಾ ಯೋಜನೆಗಳನ್ನು ಹಾಕಿಕೊಂಡಿದೆ ಎಂಬುದನ್ನು ಇಲ್ಲಿ ಹೇಳುತ್ತಿದ್ದೇನೆ. ಓದಿ ಇಸ್ರೋ ಕುರಿತು ಮಾಹಿತಿ ತಿಳಿದು ಭಾರತದ ಬಗ್ಗೆ ಹೆಮ್ಮೆ ಪಡಿ.
ಇಸ್ರೋ ಒಂಉ ಬಾಹ್ಯಾಕಾಶ ಸಂಸ್ಥೆ. ಇದು ಜಗತ್ತಿನಲ್ಲೇ ವಿಖ್ಯಾತಿಯನ್ನು ಪಡೆದುಕೊಂಡಿದ್ದು, ಇಡೀ ವಿಶ್ವವೇ ಭಾರತದ ಕಡೆಗೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ನಾಸಾಗೆ ಸರಿಸಾಟಿಯಾಗಿ ಕೆಲಸ ಮಾಡುತ್ತಿದೆ. ಅಂದಹಾಗೆ, ಇಸ್ರೋ 1969ರಲ್ಲಿ ಸ್ಥಾಪನೆಯಾಯಿತು. ಇದಕ್ಕೂ ಮುನ್ನಾ 1962ರಲ್ಲಿ ನೆಹರೂ ಮತ್ತು ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಬಾಯಿ ನೇತೃತ್ವದಲ್ಲಿ ಇಂಡಿಯನ್‍ ನ್ಯಾಷನಲ್‍ ಕಮಿಟಿ ಫಾರ್‍ ಸ್ಪೇಸ್‍ ರಿಸರ್ಚ್‍ ಅನ್ನು ಪ್ರಾರಂಭ ಮಾಡಲಾಯಿತು. ಈ ಸಂಸ್ಥೆ ಅಡಿಯಲ್ಲಿ ಬಾಹ್ಯಾಕಾಶ ಸಂಶೋಧನೆ ಮಾಡಲು ಆರಂಭಿಸಲಾಯಿತು.
ಇದಾದ 7 ವರ್ಷಗಳ ನಂತರ ಅಂದರೆ 1969ರಲ್ಲಿ ಇಂಡಿಯನ್‍ ಸ್ಪೇಸ್‍ ರಿಸರ್ಚ್‍ ಆರ್ಗನೈಸೇಷನ್‍ ಆಗಿ ಬದಲಾಯಿತು. ಅಂದಿಗೆ ಇಸ್ರೋ ಆಟಾಮಿಕ್‍ ಎನರ್ಜಿ ವಿಭಾಗದ ಅಡಿಯಲ್ಲಿ ಕೆಲಸ ಮಾಡುತ್ತಿತ್ತು. ಮುಂದೆ ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅಂದರೆ 1972ರಲ್ಲಿ ಸ್ಪೇಸ್‍ ಎಂಬ ಪ್ರತ್ಯೇಕ ವಿಭಾಗವನ್ನು ಮಾಡಿ ಅದರ ಅಡಿಯಲ್ಲಿ ಇಸ್ರೋವನ್ನು ತರಲಾಯಿತು.
ಈ ವಿಭಾಗ ನೇರವಾಗಿ ಪ್ರಧಾನಿಗೆ ತನ್ನ ವರದಿಯನ್ನು ಸಲ್ಲಿಸುತ್ತದೆ. ಹೀಗೆ ರೂಪುಗೊಂಡ ಇಸ್ರೋ ಸಂಸ್ಥೆ ಸ್ಥಾಪನೆಯಾದ 6ನೇ ವರ್ಷದಲ್ಲಿ ತನ್ನ ಸ್ಯಾಟಲೈಟನ್ನು ನಿರ್ಮಾಣ ಮಾಡಿತು. 1975ರ ಏಪ್ರಿಲ್‍ 19ರಂದು ಅಂದಿನ ಸೋವಿಯತ್‍ ಯೂನಿಯನ್‍ ಆರ್ಯಭಟ ಎಂಬ ಸ್ಯಾಟಲೈಟನ್ನು ನಭಕ್ಕೆ ಹಾರಿಸಲಾಯಿತು. ಅಂದಿಗೆ ಇನ್ನೂ ನಮ್ಮ ದೇಶದಲ್ಲಿ ಬಾಹ್ಯಾಕಾಶಕ್ಕೆ ಸ್ಯಾಟಲೈಟ್‍ಗಳನ್ನು ಹಾರಿಸಬಲ್ಲಂತಹ ರಾಕೆಟ್‍ ತಂತ್ರಜ್ಞಾನ ನಮ್ಮ ದೇಶದಲ್ಲಿ ಇನ್ನೂ ಪ್ರಾರಂಭವಾಗಿರಲಿಲ್ಲ. ಅಲ್ಲದೇ, ಸೋವಿಯತ್‍ ಯೂನಿಯನ್‍ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಅಗ್ರಸ್ಥಾನ ತಲುಪಿತ್ತು. ಇದೆಲ್ಲದೇ, ಸೋವಿಯತ್‍ ರಾಷ್ಟ್ರ ಭಾರತದ ಮಿತ್ರ ರಾಷ್ಟ್ರವಾದ್ದರಿಂದ ಬಾಹ್ಯಾಕಾಶ ಸಂಸ್ಥೆಗೆ ಬೆನ್ನೆಲುಬಾಗಿ ನಿಂತುಕೊಂಡಿತು.
ಎಷ್ಟೇ ಸ್ನೇಹ ಇದ್ದರೂ ಎಷ್ಟು ದಿನಗಳ ಕಾಲ ಮತ್ತೊಬ್ಬರ ಮೇಲೆ ಅವಲಂಬನೆಯಾಗೋದಕ್ಕೆ ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿ ಇಸ್ರೋ ತಾನೇ ನಿರ್ಮಾಣ ಮಾಡಿದ ಎಸ್‍ಎಲ್‍ವಿ ಎಂಬ ರಾಕೆಟ್‍ ನಲ್ಲಿ ರೋಹಿಣಿ ಎಂಬ ಸ್ಯಾಟಲೈಟ್‍ ಅನ್ನು 1980ರಲ್ಲಿ ಕಕ್ಷೆಗೆ ಹಾರಿ ಬಿಡಲಾಯಿತು. ಇದಾದ ನಂತರ ಪೋಲಾರ್‍ ಎಂಬ ಸ್ಯಾಟಲೈಟ್‍ ಲಾಂಚಿಂಗ್‍ ವೆಹಿಕಲ್‍ ಅನ್ನು ನಿರ್ಮಾಣ ಮಾಡಲಾಯಿತು. ಅದನ್ನು ಪಿಎಸ್‍ಎಲ್‍ವಿ ಎಂದು ಕರೆಯಲಾಗುತ್ತದೆ.
ಇಂದಿನ ಜಿಎಸ್‍ಎಲ್‍ವಿ ಅಂದರೆ ಜಿಯೋ ಸಿಂಕ್ರೋನೈಸ್ಡ್‍ ಸ್ಯಾಟಲೈಟ್‍ ಲಾಂಚಿಂಗ್‍ ವೆಹಿಕಲ್‍ ಎಂದು. ಜಿಎಸ್‍ಎಲ್‍ವಿ ಆವಿಷ್ಕಾರಕ್ಕೂ ಮುನ್ನಾ ಪಿಎಸ್‍ಎಲ್‍ವಿ ಮೂಲಕವೇ ಸ್ಯಾಟಲೈಟ್‍ಗಳನ್ನು ಲಾಂಚ್‍ ಮಾಡಲಾಗುತ್ತಿತ್ತು. ಇಸ್ರೋ ನಿರ್ಮಾಣ ಮಾಡಿರುವ ಜಿಎಸ್ಎಲ್‍ವಿ ಮಾರ್ಕ್‍ 3 ಅತ್ಯಂತ ಬಲಿಷ್ಠ ಸ್ಯಾಟಲೈಟ್‍ ಲಾಂಚಿಂಗ್‍ ವೆಹಿಕಲ್‍ ಎಂದು ಗುರುತಿಸಲಾಗಿದೆ.
ಇಸ್ರೋನ ಸಾಧನೆಗಳು:
• 1983ರಲ್ಲಿ ಟೆಲಿಕಮ್ಯುನಿಕೇಷನ್‍ ಸ್ಯಾಟಲೈಟ್‍ ಅಂದರೆ ಇನ್‍ಸ್ಯಾಟನ್ನು ಅಭಿವೃದ್ಧಿ ಪಡಿಸಿತು. ಇನ್‍ಸ್ಯಾಟ್‍ ಎಂದರೆ ಇಂಡಿಯನ್‍ ಸ್ಯಾಟಲೈಟ್‍ ಎಂದರ್ಥ. ಇದು ಇಡೀ ಏಷ್ಯಾ ಖಂಡದಲ್ಲಿಯೇ ಅತ್ಯಂತ ಬಲಿಷ್ಠವಾದ ಸಂವಹನ ಸ್ಯಾಟಲೈಟ್‍ ಎಂದು ಗುರುತಿಸಿಕೊಂಡಿತು.
• 1984ರ ಏಪ್ರಿಲ್‍ 2ರಂದು ರಾಕೇಶ್‍ ಶರ್ಮಾ ಎಂಬ ಗಗನಯಾತ್ರಿಯನ್ನು ಗಗನಕ್ಕೆ ಕಳುಹಿಸಿತು. ರಾಕೇಶ್‍ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹಾರಿ ಬಂದ ಯಶಸ್ವಿ ಏಕೈಕ ವ್ಯಕ್ತಿ ಎನಿಸಿಕೊಂಡಿದ್ದಾರೆ.
• 1992ರ ಆಗಸ್ಟ್‍ ನಲ್ಲಿ ಇನ್‍ಸ್ಯಾಟ್‍ 2ಎ ಅಭಿವೃದ್ಧಿ.
• 1993ರ ಜುಲೈನಲ್ಲಿ ಇನ್‍ಸ್ಯಾಟ್‍ 2ಎ ಮತ್ತು 2ಬಿಯನ್ನು ಲಾಂಚ್‍ ಮಾಡಲಾಯಿತು. ಇದು ಬಹುಉಪಯೋಗಿ ಸ್ಯಾಟಲೈಟ್‍ ಎಂದು ಗುರುತಿಸಿಕೊಂಡಿತು.
• ಕಲ್ಪನಾ 1 ಸ್ಯಾಟಲೈಟ್‍ ಅನ್ನು ಪಿಎಸ್‍ಎಲ್‍ವಿ ಮೂಲಕ ಕಕ್ಷೆಗೆ ಸೇರಿಸಲಾಗಿತ್ತು.
• 2004ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಜಿಸ್ಯಾಟ್‍-3 ಎಂಬ ಉಪಗ್ರಹವನ್ನು ನಿರ್ಮಾಣ ಮಾಡಿತು.
• 2005ರ ಡಿಸೆಂಬರ್‍ 22ರಂದು ಇನ್‍ಸ್ಯಾಟ್ 4ಎ ಅನ್ನು ಕಕ್ಷೆಗೆ ಸೇರಿಸುವ ಮೂಲಕ ಡಿಟಿಎಚ್‍ ಗಳ ಬಳಕೆಗೆ ವೇದಿಕೆಯನ್ನು ಕಲ್ಪಿಸಿತು.
• ಹೀಗೆ ಒಂದರ ಮೇಲೊಂದು ಪ್ರಯೋಗ ಮಾಡುತ್ತಿದ್ದ ಇಸ್ರೋ ಚಂದ್ರನ ಮೇಲೆ ಕಾಲಿಡುವ ಯೋಜನೆಯನ್ನು ಹಾಕಿಕೊಂಡಿತು. ಇದಕ್ಕಾಗಿ ದಶಕಗಳ ಕಾಲ ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದ ಇಸ್ರೋ 2003ರಲ್ಲಿ ಚಂದ್ರಯಾನ-1ರ ಯೋಜನೆ ಹಾಕಿಕೊಂಡಿತು. ಈ ವೇಳೆ ಅಟಲ್‍ ಬಿಹಾರಿ ವಾಜಪೇಯಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಚಂದ್ರಯಾನ-1 ಭಾರತದ ಗೌರವವನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದ್ದರು.
• 2008ರ ಅಕ್ಟೋಬರ್‍ 22ರಂದು ಪಿಎಸ್‍ಎಲ್‍ವಿ-ಸಿ11 ರಾಕೆಟ್‍ ಮೂಲಕ ಚಂದ್ರಯಾನ-1 ಅನ್ನು ಯಶಸ್ವಿಯಾಗಿ ಪೂರೈಸಿತು. ಚಂದ್ರಯಾನ-1 ಇಡೀ ಜಗತ್ತೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿತು. ಇದು ಚಂದ್ರನ ಮೇಲೆ ನೀರಿರುವ ಬಗ್ಗೆ ಖಚಿತವಾದ ಮಾಹಿತಿಯನ್ನು ನೀಡಿತು.
• ಇದಾದ ನಂತರ 2013ರ ಜುಲೈನಲ್ಲಿ ಐಆರ್‍ಎನ್‍ಎಸ್ಎಸ್‍-1ಎ ನ್ಯಾವಿಗೇಷನ್‍ ಸ್ಯಾಟಲೈಟ್‍ ಅನ್ನು ಉಡಾವಣೆ ಮಾಡಿತು.
• 2013ರ ನವೆಂಬರ್‍ 5ರಂದು ಮಂಗಳಯಾನ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿತ್ತು. ಈ ಯೋಜನೆಗೆ 400 ಕೋಟಿ ರೂಪಾಯಿ ಹಣ ಖರ್ಚಾಗಿತ್ತು.
• 2017ರ ಫೆಬ್ರವರಿಯಲ್ಲಿ ಇಸ್ರೋ ಒಟ್ಟು 104 ಸ್ಯಾಟಲೈಟ್ ಗಳನ್ನು ಕಕ್ಷೆಗೆ ಸೇರಿಸುವ ಮೂಲಕ ಜಗತ್ತಿನಲ್ಲೇ ಬಹುದೊಡ್ಡ ಸಾಧನೆಯನ್ನು ಮಾಡಿತು. ಇದೇ ವರ್ಷ ಜಿಎಸ್‍ಎಲ್‍ವಿ ಎಂಬ ಬಲಿಷ್ಠ ರಾಕೆಟ್‍ ಅನ್ನು ಅಭಿವೃದ್ಧಿ ಪಡಿಸಿತು.
ಹೀಗೆ ನಾನಾ ರೆಕಾರ್ಡ್‍ಗಳನ್ನು ಮಾಡುವ ಮೂಲಕ ಜಗತ್ತಿನಲ್ಲೇ ಬಹುದೊಡ್ಡ ಬಾಹ್ಯಾಕಾಶ ಸಂಸ್ಥೆಯಾಗಿ ಬೆಳವಣಿಗೆ ಹೊಂದಿದೆ.
ಅಲ್ಲದೇ, ಈಗ ಚಂದ್ರಯಾನ-2 ಅನ್ನು ಕೂಡ ಯಶಸ್ವಿಯಾಗಿ ನಭಕ್ಕೆ ಸೇರಿಸಿದೆ. ಆ ಮೂಲಕ ಜಗತ್ತಿನಲ್ಲೇ ಯಾವುದೇ ಬಾಹ್ಯಾಕಾಶ ಸಂಸ್ಥೆ ಮಾಡದ ಸಾಧನೆಯನ್ನು ಮಾಡಿದೆ. ಅಮೆರಿಕ, ರಷ್ಯಾ, ಚೀನಾಗಳ ಸಾಲಿಗೆ ಸೇರಿಕೊಂಡಿದೆ. ಹಾಗಾಗಿಯೇ ಚಂದ್ರಯಾನ-2 ಬಹಳ ಯಶಸ್ಸು ಕಾಣಲಿ ಎಂಬುದು ಎಲ್ಲಾ ಭಾರತೀಯರ ಆಶಯ.
ಇಸ್ರೋ ಕೇವಲ ದೇಶಕ್ಕೆ ಹೆಗ್ಗಳಿಕೆ ತರುವಂತಹ ಕಾರ್ಯವನ್ನು ಮಾಡುತ್ತಿಲ್ಲ. ದೇಶದ ರಕ್ಷಣೆಯನ್ನು ಮಾಡುವಂತಹ ಹೊಣೆಯನ್ನು ಹೊತ್ತಿದೆ. ಇದರ ಪ್ರಧಾನ ಕಚೇರಿ ನಮ್ಮ ಬೆಂಗಳೂರಿನಲ್ಲಿರುವುದು ಮತ್ತೊಂದು ಹೆಮ್ಮೆ.

LEAVE A REPLY

Please enter your comment!
Please enter your name here